ಭಾರತೀಯ ಭಾಷೆಗಳಿಗೆ ಧ್ವನಿಯಾಗಲಿದೆ ‘ಹೈಫನ್’
ಬಹುವಚನ ಟ್ರಸ್ಟ್ನಿಂದ ರೂಪುಗೊಂಡ ಸಾಹಿತ್ಯ ವೇದಿಕೆ * ಮಹತ್ವದ ಕೃತಿಗಳು ಇಂಗ್ಲಿಷ್ಗೆ ಅನುವಾದ
ಬೆಂಗಳೂರು: ಭಾರತೀಯ ಭಾಷೆಗಳ ಸಾಹಿತ್ಯವನ್ನು ಇಂಗ್ಲಿಷ್ಗೆ ಅನುವಾದಿಸಿ, ಪ್ರಪಂಚದಾದ್ಯಂತ ಓದುಗರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ‘ಹೈಫನ್’ ಶೀರ್ಷಿಕೆಯಡಿ ಸಾಹಿತ್ಯ ವೇದಿಕೆಯೊಂದು ಜೀವ ತಳೆದಿದೆ.
ಈ ವೇದಿಕೆಯು ಕತೆಗಾರ ವಿವೇಕ ಶಾನಭಾಗ ಅವರು ಪ್ರಾರಂಭಿಸಿರುವ ‘ಬಹುವಚನ ಟ್ರಸ್ಟ್’ನ ಭಾಗವಾಗಿದೆ. ಇದು ಸಾಹಿತ್ಯ ಪತ್ರಿಕೆ, ಪ್ರಕಾಶನ ಸಂಸ್ಥೆ ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳನ್ನು ಒಳಗೊಂಡಿದೆ.
‘ಹೈಫನ್’ ಭಾರತೀಯ ಭಾಷಾ ಸಾಹಿತ್ಯಕ್ಕೆ ಸಂಬಂಧಿಸಿದ ದ್ವೈವಾರ್ಷಿಕ ಪತ್ರಿಕೆಯಾಗಿದೆ. ದೀಪಾ ಗಣೇಶ್ ಅವರು ‘ಹೈಫನ್’ನ ಮುಖ್ಯ ಸಂಪಾದಕರು. ಬರಹಗಾರರು ಮತ್ತು ಅನುವಾದಕರ ಬೆಂಬಲದಿಂದ ಈ ವೇದಿಕೆ ಭಾರತೀಯ ಭಾಷೆಗಳ ನಡುವೆ ಸೇತುವೆಯಾಗಿ ಕೆಲಸ ಮಾಡಲಿದೆ. ಮುದ್ರಿತ ಮತ್ತು ಡಿಜಿಟಲ್ ರೂಪಗಳಲ್ಲಿ ಪ್ರಕಟವಾಗುವ ಇಂಗ್ಲಿಷ್ ಸಾಹಿತ್ಯ ಪತ್ರಿಕೆ ಇದಾಗಿದೆ.
“ಭಾರತದ ವೈವಿಧ್ಯಮಯ ಭಾಷಾ ಪರಂಪರೆಗಳಿಂದ ರೂಪುಗೊಂಡ ಕಥೆಗಳು ಮತ್ತು ಅನುಭವಗಳನ್ನು, ಕಾದಂಬರಿ, ಕವನ, ಪ್ರಬಂಧಗಳು ಮತ್ತು ಸಾಹಿತ್ಯಿಕ ಸಂವಾದಗಳ ಮೂಲಕ ಇಂಗ್ಲಿಷ್ ಜಗತ್ತಿಗೆ ‘ಹೈಫನ್’ ವೇದಿಕೆ ತಲುಪಿಸುತ್ತದೆ. ಪ್ರತಿ ಸಂಚಿಕೆಯಲ್ಲಿ ಒಂದು ನಿರ್ದಿಷ್ಟ ಸಾಹಿತ್ಯ ಸಂಸ್ಕೃತಿಯ ಮೇಲೆ ಕೇಂದ್ರೀಕರಿಸಲಾಗುತ್ತದೆ. ಮೊದಲ ಸಂಚಿಕೆಯಲ್ಲಿ ಮರಾಠಿ ಸಾಹಿತ್ಯಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ.” — ವಿವೇಕ ಶಾನಭಾಗ
‘ಹೈಫನ್’ ಪ್ರಕಾಶನವು ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಿಂದ ಮಹತ್ವದ ಕೃತಿಗಳನ್ನು ಇಂಗ್ಲಿಷ್ಗೆ ಅನುವಾದಿಸುವ ಉದ್ದೇಶ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ವಿಶೇಷ
ಈ ವೇದಿಕೆಯು ಭಾರತೀಯ ಭಾಷೆಗಳ ನಡುವೆ ಸಾಹಿತ್ಯ ವಿನಿಮಯ ಮಾಡುವುದರ ಜೊತೆಗೆ, ಇಲ್ಲಿಯ ಸಾಹಿತ್ಯವನ್ನು ವಿಶ್ವದಾದ್ಯಂತ ಓದುಗರಿಗೆ ಪರಿಚಯಿಸುವ ಗುರಿ ಹೊಂದಿದೆ. — ವಿವೇಕ ಶಾನಭಾಗ, ಬಹುವಚನ ಟ್ರಸ್ಟ್ನ ಸಂಸ್ಥಾಪಕ
26ಕ್ಕೆ ಮೊದಲ ಸಂಚಿಕೆ ಜನಾರ್ಪಣೆ
‘ಹೈಫನ್’ನ ಮೊದಲ ಸಂಚಿಕೆಯ ಜನಾರ್ಪಣೆ ಕಾರ್ಯಕ್ರಮವನ್ನು ಇದೇ 26ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (BIC) ಹಮ್ಮಿಕೊಳ್ಳಲಾಗಿದೆ.
ಅತಿಥಿಗಳಾಗಿ ಬರಹಗಾರರಾದ ಗೀತಾಂಜಲಿ ಶ್ರೀ, ನಮಿತಾ ಗೋಖಲೆ ಹಾಗೂ ರಂಜಿತ್ ಹೊಸಕೋಟೆ ಭಾಗವಹಿಸಲಿದ್ದಾರೆ. ಅರುಂಧತಿ ನಾಗ್ ಅವರು ಕವಿತೆಯೊಂದನ್ನು ವಾಚಿಸಲಿದ್ದಾರೆ.
ಇಂಗ್ಲಿಷ್ನಲ್ಲಿ ಪ್ರಕಟವಾಗುವ ಈ ಪತ್ರಿಕೆ 272 ಪುಟಗಳನ್ನು ಹೊಂದಿರಲಿದೆ. ಒಂದು ಸಂಚಿಕೆಯ ಬೆಲೆ ₹799 ಆಗಿದ್ದು, ಎರಡು ಸಂಚಿಕೆಗಳನ್ನು ಒಳಗೊಂಡ ವಾರ್ಷಿಕ ಚಂದಾದಾರಿಕೆ ₹1299 ನಿಗದಿಪಡಿಸಲಾಗಿದೆ.
ಇದೇ 22ರಿಂದ ಆನ್ಲೈನ್ ಮೂಲಕ ಸಂಚಿಕೆಯನ್ನು ಕಾಯ್ದಿರಿಸಬಹುದು ಎಂದು ಟ್ರಸ್ಟ್ ತಿಳಿಸಿದೆ.